ಕಿಂಬರ್ಲಿ

ದಕ್ಷಿಣ ಆಫ್ರಿಕದ ಮಧ್ಯಭಾಗದಲ್ಲಿ ಆರೆಂಜ್ ಫ್ರೀ ಸ್ಟೇಟಿನ ಗಡಿಯ ಬಳಿ, ಉತ್ತರ ಗುಡ್ ಹೋಪ್ ಪ್ರಾಂತ್ಯದಲ್ಲಿರುವ ಮುಖ್ಯ ನಗರ. ವಜ್ರದ ಗಣಿಗಳಿಂದಾಗಿ ಪ್ರಸಿದ್ಧವಾಗಿದೆ. ಸಮುದ್ರಮಟ್ಟಕ್ಕಿಂತ 4,012" ಎತ್ತರದಲ್ಲಿರುವ ಈ ನಗರದ ಜನಸಂಖ್ಯೆ 77,180 (1960). ಇವರಲ್ಲಿ 23,987 ಮಂದಿ ಐರೋಪ್ಯರು. 

ಕಿಂಬರ್ಲಿ ನಗರ ಮಧ್ಯದಲ್ಲಿ ಪೌರಸಭಾ ಕಟ್ಟಡವೂ ಉತ್ತರ ಕೇಪ್ ತಾಂತ್ರಿಕ ಕಾಲೇಜೂ ಕಿಂಬರ್ಲಿ ನಾಟ್ಯಶಾಲೆಯೂ ವಿಲಿಯಂ ಹಂಫ್ರೀಸ್ ಕಲಾಕೇಂದ್ರವೂ ಇವೆ. ಇಲ್ಲಿರುವ ಜಾನ್ ಸ್ಮಟ್ಸ್ ವೃಕ್ಷರಾಜಿತ ಮಾರ್ಗದ ಉದ್ಯಾನದ ನಡುವೆ ವಜ್ರದ ಮೊರವೊಂದನ್ನು ಎತ್ತಿಹಿಡಿದ ಕಾರ್ಮಿಕರ ಪ್ರತಿಮೆಯೊಂದಿದೆ. ಇದು ಕಿಂಬರ್ಲಿಯ ಹಳೆಯ ಚರಿತ್ರೆಯ ಸಂಕೇತ. ನಗರದ ವಸತಿಕೇಂದ್ರದ ಮುಖದಲ್ಲಿ ಸೆಸಿಲ್ ರ್ಹೋಡ್ಸನ ಪ್ರತಿಮೆಯಿದೆ. ಕಿಂಬರ್ಲಿಯಲ್ಲಿ ಇನ್ನೂ ಅನೇಕ ಸಾರ್ವಜನಿಕ ಕಟ್ಟಡಗಳೂ, ಚರ್ಚುಗಳೂ, ಸಾರ್ವಜನಿಕ ಗ್ರಂಥಾಲಯಗಳೂ, ವಿದ್ಯಾಸಂಸ್ಥೆಗಳೂ, ಆಸ್ಪತ್ರೆಗಳೂ, ಸಸ್ಯಶಾಸ್ತ್ರಕ ಉದ್ಯಾನವೂ ಇವೆ.

ಕಿಂಬರ್ಲಿಗೂ ದಕ್ಷಿಣ ಆಫ್ರಿಕದ ಇತರ ಪ್ರಮುಖ ಪಟ್ಟಣಗಳಿಗೂ ರೈಲು, ರಸ್ತೆ ಮತ್ತು ವಾಯುಮಾರ್ಗಗಳಿವೆ. ಕಿಂಬರ್ಲಿ ಮುಖ್ಯವಾಗಿ ವಜ್ರದ ಗಣಿಗಳಿಗೆ ಪ್ರಸಿದ್ಧವಾಗಿದ್ದರೂ ಇದು ಉತ್ತರ ಕೇಪ್ ಪ್ರಾಂತ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ಇದರ ಪ್ರಾಮುಖ್ಯ ಹೆಚ್ಚಿದೆ. ಕಬ್ಬಿಣದ ಅದುರು, ಉಪ್ಪು, ಕಲ್ನಾರು, ಸುಣ್ಣದ ಕಲ್ಲು ಮತ್ತು ಮ್ಯಾಂಗನೀಸ್‍ಗಳಲ್ಲಿ  ವಹಿವಾಟು ನಡೆಯುತ್ತದೆ. ಬಟ್ಟೆಗಿರಣಿಗಳೂ ಯಂತ್ರಗಳ ಕಾರ್ಖಾನೆಗಳೂ ಉಂಟು.

ಕಿಂಬರ್ಲಿಯ ಇತಿಹಾಸ 1871ರಲ್ಲಿ ಆರಂಭವಾಯಿತು. ಅಲ್ಲಿಯ ಹೊಲಗಳಲ್ಲಿ ವಜ್ರಗಳಿದ್ದುದನ್ನು ಗಣಿಗಾರರು ಕಂಡುಹಿಡಿದು ಅಲ್ಲೆ ನೆಲಸಿದರು. ಮೊದಲು ಅಲ್ಲಿ ಮೂರು ಗಣಿಗಳಿದ್ದುವು. ಇವುಗಳಲ್ಲಿ ಮೂರನೆಯದನ್ನು 1973ರಲ್ಲಿ ಕಿಂಬರ್ಲಿ ಎಂದು ಕರೆಯಲಾಯಿತು. ಬ್ರಿಟನಿನ ವಸಾಹತು ಸಚಿವನಾಗಿದ್ದ ಲಾರ್ಡ್ ಕಿಂಬರ್ಲಿಯ ಗೌರವಾರ್ಥ ಅದಕ್ಕೆ ಈ ಹೆಸರಿಡಲಾಯಿತು. ಗಣಿಗಾರರ ಶಿಬಿರಗಳು ಕ್ರಮೇಣ ಒಂದಾಗಿ ನಗರವಾಗಿ ಬೆಳೆದಾಗ ಇಡೀ ಪಟ್ಟಣಕ್ಕೂ ಕಿಂಬರ್ಲಿ ಎಂಬ ಹೆಸರೇ ಬಂತು. 1880ರಲ್ಲಿ ಈ ಪಟ್ಟಣವನ್ನು ಕೇಪ್ ಕಾಲೊನಿಗೆ ಸೇರಿಸಲಾಯಿತು.

1885ರಲ್ಲಿ ಕಿಂಬರ್ಲಿಯಿಂದ ಕೇಪ್ ಟೌನಿಗೆ ರೈಲ್ವೆ ಏರ್ಪಟ್ಟಾಗ ಕಿಂಬರ್ಲಿಗೆ ಹೆಚ್ಚಿನ ಪ್ರಾಮುಖ್ಯ ಬಂತು. ದಕ್ಷಿಣ ಆಫ್ರಿಕ ಯುದ್ಧದಲ್ಲಿ ಇದು 126 ದಿನಗಳ ಕಾಲ ಮುತ್ತಿಗೆಗೆ ಒಳಗಾಗಿತ್ತು. ಬಹುತೇಕ ಉಪವಾಸ, ಉಗ್ರ ಫಿರಂಗಿ ದಾಳಿ ಇವುಗಳನ್ನು ಎದುರಿಸಿ ನಿಂತಿತು. ಕೊನೆಗೆ 1900 ಫೆಬ್ರವರಿಯಲ್ಲಿ ಜನರಲ್ ಜಾನ್ ಫ್ರೆಂಚ್ ಇದನ್ನು ಮುತ್ತಿಗೆಯಿಂದ ವಿಮೋಚನೆಗೊಳಿಸಿದ. ಕಿಂಬರ್ಲಿಯ ನೆರೆಯಲ್ಲಿ ಬೆಳೆದಿದ್ದ ಇನ್ನೊಂದು ವಸತಿಯನ್ನೂ ಸೇರಿಸಿ ಇದಕ್ಕೆ ನಗರದ ಸ್ಥಾನ ನೀಡಲಾಯಿತು. ಒಂದನೆಯ ಮಹಾಯುದ್ಧ ಕಾಲದಲ್ಲೂ 1930ರ ದಶಕದ ಆದಿಭಾಗದ ಮುಗ್ಗಟ್ಟಿನ ಕಾಲದಲ್ಲೂ ಇಲ್ಲಿಯ ವಜ್ರದ ಗಣಿಗಳನ್ನು ಮುಚ್ಚಲಾಗಿತ್ತು. 1935ರಲ್ಲಿ ಮತ್ತೆ ಗಣಿಗೆಲಸ ಪ್ರಾರಂಭವಾಯಿತು. 1960ರ ದಶಕದ ಈ ಜಿಲ್ಲೆಯ ಡ್ಯುಟಾಯಿಟ್ ಸ್ಟ್ಯಾನ್, ಬುಲ್ಡ್‍ಫಾಂಟೀನ್, ವೆಸೆಲ್‍ಟನ್ ಮತ್ತು ಡಿ ಬೀರ್ಸ್ ಗಣಿಗಳಲ್ಲಿ ವಜ್ರ ತೆಗೆಯುತ್ತಿದ್ದರು. ಕಿಂಬರ್ಲಿ ಗಣಿಗೆ 'ಮಹಾ ಬಿಲ' ಎಂಬ ಅಡ್ಡಹೆಸರಿತ್ತು. ಇದರ ವ್ಯಾಸ 1,500': ಸುತ್ತಳತೆ ಸುಮಾರು 1 ಮೈ. ಇದನ್ನು 1914ರಲ್ಲಿ ಮುಚ್ಚಲಾಯಿತು.

       (ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ